ಹರ್ಕ್ಯೂಲಸ್
	ಗ್ರೀಕ್ ಪೌರಾಣಿಕ ವೀರ. ಗ್ರೀಕರ ದೇವೇಂದ್ರನಾದ ಜ್ಯೂಸ್ ಇವನ ತಂದೆ. ಭೂಲೋಕದ ಥೀಬ್ಸ್ ದೊರೆ ಆ್ಯಂಫಿಟ್ರಿಯನ್‍ನ ಪತ್ನಿ ಅಲ್ಕೆಮನಿಯ ಇವನ ತಾಯಿ. ಇವನನ್ನು ಕಂಡರೆ ಜ್ಯೂಸ್‍ಗೆ ಅತಿಪ್ರೀತಿ. ಆದರೆ ಜ್ಯೂಸ್‍ನ ಮತ್ಸರಿಯಾದ ಪತ್ನಿ ಹೀರಾಳಿಗೆ ಅಸೂಯೆ. ಇವಳಿಂದ ಹರ್ಕ್ಯೂಲಸ್ ಅನೇಕ ಕಷ್ಟಗಳನ್ನು ಅನುಭವಿಸಬೇಕಾಯಿತು. ಇವನು ಮಗುವಾಗಿದ್ದಾಗ ಹೀರಾಳಿಂದ ಕಳಿಸಲ್ಪಟ್ಟ ಎರಡು ಘೋರ ಸರ್ಪಗಳನ್ನು ತನ್ನ ಕೈಯಿಂದ ಹಿಸುಕಿ ಕೊಂದ. ಇವನು ಲೀನಸ್ ಎಂಬ ನಾಯಕನಲ್ಲಿ ದೋಷವನ್ನು ಕಂಡು ಲೈರ್‍ನಿಂದ (ತಂತಿವಾದ್ಯ) ಹೊಡೆದು ಕೊಂದ. ಅನಂತರ ದೊರೆ ಆ್ಯಂಫಿಟ್ರಿಯನ್ ತನ್ನ ಪಶುಗಳನ್ನು ಕಾಯಲು ಅಪ್ಪಣೆಕೊಟ್ಟ. ಆ ಸಮಯದಲ್ಲಿ ಪಶುಗಳನ್ನು ಧ್ವಂಸ ಮಾಡುತ್ತಿದ್ದ ಭಾರೀ ಸಿಂಹವೊಂದನ್ನು ಕೊಂದ. ಅನಂತರ ಥೀಬ್ಸ್‍ನಿಂದ ಕಪ್ಪಕಾಣಿಕೆಯನ್ನು ಒತ್ತಾಯದಿಂದ ವಸೂಲು ಮಾಡುತ್ತಿದ್ದ ಆರ್ಕೊಮನಸ್ ದೊರೆ ಎರ್ಗಿನ್ಸುಅನ್ನು ಕೊಂದ. ಅನಂತರ ಹೀರಾಳ ಪ್ರಾಭಾವದಿಂದ ಬುದ್ಧಿಭ್ರಮಣೆಯಾದ ಸ್ವಲ್ಪ ಕಾಲದ ಅನಂತರ ಡೆಲ್ಫಿ ಭವಿಷ್ಯವಾಣಿಯ ಅಪ್ಪಣೆಯಂತೆ ಹನ್ನೆರಡು ವರ್ಷ ಟಿರ್ಯಾನ್ಸ್‍ನಲ್ಲಿ ನೆಲಸಿ ಯುರ್ಯಸ್ಥೆಸ್ ಆದೇಶದಂತೆ ಕೆಲಸ ಮಾಡಿದ. ಇದನ್ನು ಹಕ್ರ್ಯೂಲಸ್‍ನ ಹನ್ನೆರಡು ಸಾಹಸವೆನ್ನುತ್ತಾರೆ. ನೆಮೇಯನ್ ಪ್ರದೇಶದಲ್ಲಿ ಕ್ಲೆನಿಕ್ ಮತ್ತು ಫಿಲಸ್ ನಡುವಿನ ಕಣಿವೆಯಲ್ಲಿ ಪೀಡಿಸುತ್ತಿದ್ದ ಸಿಂಹವನ್ನು ಕೊಂದ. ಲೆರ್ನ ಸರೋವರದ ಕೆಸರಿನಲ್ಲಿರುವ ಒಂಬತ್ತು ತಲೆಯ ಮಹೋರಗವನ್ನು (ಡ್ರಾಗನ್) ತನ್ನ ಹಿತ್ತಾಳೆ ಗದೆ ಮತ್ತು ಕಾದ ಖಡ್ಗದಿಂದ ಹೊಡೆದುಕೊಂದ. ಬಂಗಾರದ ಕೊಂಬುಗಳನ್ನು ಮತ್ತು ಹಿತ್ತಾಳೆ ಕಾಲ್ಗೊರಸುಳ್ಳ ಡಯಾನಳ ಸಾರಂಗವನ್ನು ಆರ್ಕಿಡಿಯ ಪ್ರದೇಶದಿಂದ ತಂದ. ಇರ್‍ಮನ್ಮಿಥಿಯನ್‍ನಲ್ಲಿದ್ದ ಭಾರೀಗಾತ್ರದ ಕ್ರೂರ ಹಂದಿಯನ್ನು ಹಿಡಿದು ತಂದ. ಎಲಿಸ್ ದೊರೆ ಆಗೆಯನ್‍ನ ಕೊಟ್ಟಿಗೆಯನ್ನು ಒಂದೇ ರಾತ್ರಿಯಲ್ಲಿ ಶುಚಿ ಮಾಡಿದ ಅಲ್ಫೆಸ್ ಮತ್ತು ಪೆನೆಸ್ ನದಿಯನ್ನು ತಿರುಗಿಸಿದ. ಸ್ವಯಮ್‍ಫಲ್ಸಿ ಸರೋವರದ ಹತ್ತಿರ ವಾಸಿಸುತ್ತಿದ್ದ ಹಿತ್ತಾಳೆ ಕೊಕ್ಕು ಮತ್ತು ಉಗುರುಗಳನ್ನು ಹೊಂದಿದ್ದ ನರಮಾಂಸ ತಿನ್ನುವ ಕ್ರೂರ ರಣಹದ್ದುಗಳನ್ನು ತನ್ನ ಬತ್ತಳಿಕೆಯಲ್ಲಿದ್ದ ವಿಷಪೂರಿತ ಬಾಣಗಳಿಂದ ಹೊಡೆದು ನಾಶಪಡಿಸಿದ. ಕ್ರೀಟ್ ದ್ವೀಪ್‍ವನ್ನು ಹಾಳು ಮಾಡುತ್ತಿದ್ದ ಸುಂದರ ಮತ್ತು ಬಲಿಷ್ಠವಾದ ಗೂಳಿಯನ್ನು ತನ್ನ ಹೆಗಲ ಮೇಲೆ ಹೊತ್ತುತಂದ. ಥ್ರಾಸ್‍ನ ನಿರಂಕುಶ ಮತ್ತು ಕ್ರೂರಿ ದೊರೆ ಡಿಯೋಮೆಡೆಸ್‍ನನ್ನು ಕೊಂದು, ಅವನು ಸಾಕಿದ ನರಭಕ್ಷಕ ಕುದುರೆಗಳನ್ನು ತಂದು ಥೆರ್‍ಮೊಡೊನ್ ನದಿಯ ಹತ್ತಿರ ವಾಸಿಸುತ್ತಿದ್ದ ರಣಧೀರೆಯರ ರಾಣಿ ಪೆಪ್ಪೆಲ್ಯಾಟಳನ್ನು ಸೋಲಿಸಿ ರತ್ನ ಖಚಿತವಾದ ನಡುಕಟ್ಟನ್ನು ತಂದ. ಗ್ರೆಯಾನ್ ದೊರೆ ಗಾಡೆಸ್‍ನನ್ನು ಕೊಂದು ನರಮಾಂಸ ತಿನ್ನುವ ಗೂಳಿಗಳ ಹಿಂಡನ್ನು ತಂದ. ಅಟ್ಲಾಸ್ ಪರ್ವತದ ತಪ್ಪಲಿನಲ್ಲಿನ ಸುಂದರ ತೋಟದಲ್ಲಿ ಅಪ್ಸರೆಯರು ವಾಸಿಸುತ್ತಿದ್ದ ಸ್ಥಳದಲ್ಲಿ ಕಾವಲಿದ್ದ ಉಗ್ರಸರ್ಪವನ್ನು ಕೊಂದು ಬಂಗಾರದ ಸೇಬಿನ ಮರದಿಂದ ಸೇಬುಗಳನ್ನು ಕಿತ್ತು ತಂದ. ಪಾತಾಳದ ದೊರೆಯ ಅರಮನೆ ಬಾಗಿಲನ್ನು ಕಾಯುತ್ತಿದ್ದ ಮೂರು ತಲೆಯ ನಾಯಿಯನ್ನು ಬಂಧಿಸಿ ತಂದ. ಅದನ್ನು ನೋಡಿ ಹೆದರಿದ ಮೈಸಿನಿಯ ದೊರೆ ಅದನ್ನು ಪಾತಾಳಕ್ಕೆ ಹಿಂದಿರುಗಿಸಲು ಹೇಳಿದ. ಹೀಗೆ ಹನ್ನೆರಡು ಕಾರ್ಯಗಳನ್ನು ಮಾಡಿ ಜಯಶೀಲನಾದ.

	ಅರ್ಧಕುದುರೆ, ಅರ್ಧಮನುಷ್ಯ ಶರೀರವುಳ್ಳ ರಾಕ್ಷಸರೊಡನೆ ಹೋರಾಡುವಾಗ ಆಕಸ್ಮಿಕವಾಗಿ ತನ್ನ ಗೆಳೆಯನನ್ನು ಕೊಂದ. ಈ ಕಾರ್ಯಗಳ ಅನಂತರ ಜ್ಯೂಸ್ ದೇವರಿಗೆ ತನ್ನ ವಿಜಯೋತ್ಸವದ ಯಶಸ್ಸನ್ನು ಸಮರ್ಪಿಸುವ ಸಮಯದಲ್ಲಿ ತನ್ನ ಪತ್ನಿ ಡಿಯಾನೈರ್ ಕಳುಹಿಸಿದ ವಿಷಪೂರಿತ ಅಂಗಿಯನ್ನು ಧರಿಸಿ ವಿಷದ ಪ್ರಭಾವದಿಂದ ಪ್ರಾಣ ಸಂಕಟಕ್ಕೆ ಒಳಗಾಗಿ ಯಾತನೆ ಮತ್ತು ನಡುಕದಿಂದ ಉರಿಯುತ್ತಿರುವ ಬೆಂಕಿಗೆ ಬಿದ್ದ. ಇವನ ಮರಣದ ಅನಂತರ ಚಿತೆಯು ಉರಿಯುವಾಗ ಮೋಡವು ಅವನನ್ನು ಒಲಂಪಸ್‍ಗೆ (ಗ್ರೀಕರ ದೇವಲೋಕ) ತೆಗೆದುಕೊಂಡು ಹೋಯಿತು. ಇವನು ಮನುಷ್ಯತ್ವದಿಂದ ದೇವತ್ವವನ್ನು ಹೊಂದಿ ಗ್ರೀಕ್ ಪುರಾಣದಲ್ಲಿ ಮುಖ್ಯಸ್ಥಾನ ಪಡೆದ.                                     				
		(ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ